ನಮ್ಮ ದೇಶ ಭಾರತ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಹೆಮ್ಮೆಗೆ ಕಾರಣವಾದ ವಿಷಯಗಳು ಹಲವು. ಭಾರತದ ಸಂಕೃತಿ, ಕಲೆ, ಸಂಪ್ರದಾಯ, ಇತಿಹಾಸ, ನೈಸರ್ಗಿಕ ಸೌಂದರ್ಯ ಇತ್ಯಾದಿ ಜನರ ಮನಸೆಳೆಯುತ್ತದೆ. ಹಳೆ ಕಾಲದಿಂದಲೂ ಜೀವಂತವಾಗಿರುವ ಅನೇಕ ಸಂಪ್ರದಾಯಗಳು ಭಾರತದ ಹಿರಿಮೆಯನ್ನು ದ್ವಿಗುಣಗೊಳಿಸಿವೆ. ಭಾರತದ ಪ್ರತಿ ರಾಜ್ಯ ತನ್ನದೇ ಆದ ವೈಶಿಷ್ಟಯವನ್ನು ಹೊಂದಿದೆ. ಕರ್ನಾಟಕದ ಭಾಷೆ ಚಂದ, ಹಬ್ಬಗಳ ಆಚರಣೆ ಚಂದ. ನಮ್ಮ ಉತ್ತರ ಕರ್ನಾಟಕದಲ್ಲಂತೂ ಹಬ್ಬಗಳಿಗೆ ವಿಶೇಷ ಸ್ಥಾನ ಮಾನ, ಪ್ರತಿಯೊಂದು ಸಣ್ಣ ಆಚರಣೆಯೂ ಹಬ್ಬವಾಗೇ ಕಾಣುತ್ತದೆ.
ಇಷ್ಟೆಲ್ಲಾ ಹಿನ್ನಲೆಯನ್ನು ಕೊಡಲು ಕಾರಣ, ನಾವು ಮೊನ್ನೆ ಆಚರಿಸಿದ ಹಬ್ಬ ಚರಗ. ಅನ್ನದಾತೆಯಾದ ಭೂದೇವಿಗೆ ನಮನ ಸಲ್ಲಿಸುವ ಸಾಂಪ್ರದಾಯಿಕ ಆಚರಣೆ.
ಹಬ್ಬದ ಹಿನ್ನಲೆ:
------------------
ಉತ್ತರ ಕರ್ನಾಟಕದಲ್ಲಿ ರೈತರು ತಾವು ನಂಬಿದ ಭೂಮಿಗೆ ಪೂಜೆ ಸಲ್ಲಿಸುವ ವಿಶೇಷ ಹಬ್ಬ. ಎಳ್ಳ ಅಮವಾಸ್ಯೆ ದಿನದಂದು ರೈತರು ತಮ್ಮ ಕುಟುಂಬಸಹಿತ, ವಿವಿಧ ರೀತಿಯ ಅಡುಗೆಮಾಡಿ, ಎತ್ತಿನಗಾಡಿಯಲ್ಲೊ, ಟ್ಯಾಕ್ಟರ್ನಲ್ಲೋ ತಮ್ಮ ಹೊಲಕ್ಕೆ ಅತೀ ಸಂಭ್ರಮದಿಂದ ಪ್ರಯಾಣ ಮಾಡುತ್ತಾರೆ. ಮಣ್ಣಿನ ಹೆಂಟೆಯಿಂದ ಮಾಡಿದ ಐದು ಪಾಂಡವರನ್ನು ಪೂಜಿಸಿ, ತಾವು ಮಾಡಿಕೊಂಡು ಬಂದ ಆಡುಗೆಯನ್ನು ನೈವೇದ್ಯ ಮಾಡಿ, ಅದನ್ನು ಒಂದು ತಗ್ಗಿನಲ್ಲಿ ಹಾಕಿ ಮುಚ್ಚುತ್ತಾರೆ. ತದನಂತರ ಹೊಲದ ತುಂಬಾ ತಿರುಗಾಡಿ "ಹುಲ್ಲಿ ಹುಲ್ಲಿಗೋ, ಚಲ್ಲಿ ಚಲ್ಲಿಗೋ" ಎಂದು ಕೂಗುತ್ತ ಆಡುಗೆಯನ್ನು ಎಲ್ಲ ಕಡೆ ಪಸರಿಸುವಂತೆ ಭೂಸಮರ್ಪಣೆ ಮಾಡುತ್ತಾರೆ. ಇದಕ್ಕೆ ವೈಜ್ಞಾನಿಕ ಹಿನ್ನಲೆಯೂ ಉಂಟು. ಈ ಸಮಯದಲ್ಲಿ ರೈತರು ಹಿಂಗಾರೆ ಬೆಳೆಯನ್ನು[ ಕಡಲೆ, ಜೋಳ ] ಬೆಳೆದಿರುತ್ತಾರೆ. ಚಳಿ ಸರಿದು, ಬಿಸಿಲು ಆವರಿಸುವ ಸಮಯವಿದು. ಉಷ್ಣ ಹೆಚ್ಚಿದಂತೆ ಕ್ರಿಮಿ ಕೀಟಗಳ ಬೆಳವಣಿಗೆಯು ಹೆಚ್ಚಾಗುತ್ತದೆ, ಇವುಗಳು ಹೊಲದ ಬೆಳೆಗಳನ್ನು ನಾಶಮಾಡುತ್ತವೆ. ರೈತರು ಚರಗದಲ್ಲಿ ಚೆಲ್ಲಿದ ಆಹಾರವನ್ನು ಕಂಡು ಹಕ್ಕಿಗಳು, ಅದನ್ನು ತಿನ್ನಲು ಕೆಳಗಿಳಿದಾಗ, ಬೆಳೆಗೆ ಅಂಟಿದ ಕೀಟಗಳನ್ನು ಸೇವಿಸುತ್ತವೆ ಮತ್ತು ಬೆಳೆಯನ್ನು ಹುಳುಗಳಿಂದ ಮುಕ್ತಮಾಡುತ್ತವೆ. ಬೆಳೆ ಸಂಮೃದ್ದವಾಗಿ ಬೆಳೆದು ರೈತನ ಮನ ತಣಿಸುತ್ತದೆ. ಹೀಗೆ ಈ ಹಬ್ಬ ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದೆ.