25 January 2020

ಚರಗ - ರೈತರ ಹಬ್ಬ


ನಮ್ಮ ದೇಶ ಭಾರತ ಎಂದು ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ. ಹೆಮ್ಮೆಗೆ ಕಾರಣವಾದ ವಿಷಯಗಳು ಹಲವು. ಭಾರತದ ಸಂಕೃತಿ, ಕಲೆ, ಸಂಪ್ರದಾಯ, ಇತಿಹಾಸ, ನೈಸರ್ಗಿಕ ಸೌಂದರ್ಯ ಇತ್ಯಾದಿ ಜನರ ಮನಸೆಳೆಯುತ್ತದೆ. ಹಳೆ ಕಾಲದಿಂದಲೂ ಜೀವಂತವಾಗಿರುವ ಅನೇಕ ಸಂಪ್ರದಾಯಗಳು ಭಾರತದ ಹಿರಿಮೆಯನ್ನು ದ್ವಿಗುಣಗೊಳಿಸಿವೆ. ಭಾರತದ ಪ್ರತಿ ರಾಜ್ಯ ತನ್ನದೇ ಆದ ವೈಶಿಷ್ಟಯವನ್ನು ಹೊಂದಿದೆ. ಕರ್ನಾಟಕದ ಭಾಷೆ ಚಂದ, ಹಬ್ಬಗಳ ಆಚರಣೆ ಚಂದ. ನಮ್ಮ ಉತ್ತರ ಕರ್ನಾಟಕದಲ್ಲಂತೂ  ಹಬ್ಬಗಳಿಗೆ ವಿಶೇಷ ಸ್ಥಾನ ಮಾನ, ಪ್ರತಿಯೊಂದು ಸಣ್ಣ ಆಚರಣೆಯೂ ಹಬ್ಬವಾಗೇ ಕಾಣುತ್ತದೆ.  
ಇಷ್ಟೆಲ್ಲಾ ಹಿನ್ನಲೆಯನ್ನು ಕೊಡಲು ಕಾರಣ, ನಾವು ಮೊನ್ನೆ ಆಚರಿಸಿದ ಹಬ್ಬ ಚರಗ. ಅನ್ನದಾತೆಯಾದ ಭೂದೇವಿಗೆ ನಮನ ಸಲ್ಲಿಸುವ ಸಾಂಪ್ರದಾಯಿಕ ಆಚರಣೆ. 

ಹಬ್ಬದ  ಹಿನ್ನಲೆ:
------------------
 ಉತ್ತರ ಕರ್ನಾಟಕದಲ್ಲಿ ರೈತರು ತಾವು ನಂಬಿದ ಭೂಮಿಗೆ ಪೂಜೆ ಸಲ್ಲಿಸುವ ವಿಶೇಷ ಹಬ್ಬ. ಎಳ್ಳ ಅಮವಾಸ್ಯೆ ದಿನದಂದು ರೈತರು ತಮ್ಮ ಕುಟುಂಬಸಹಿತ, ವಿವಿಧ ರೀತಿಯ ಅಡುಗೆಮಾಡಿ, ಎತ್ತಿನಗಾಡಿಯಲ್ಲೊ, ಟ್ಯಾಕ್ಟರ್ನಲ್ಲೋ ತಮ್ಮ  ಹೊಲಕ್ಕೆ  ಅತೀ ಸಂಭ್ರಮದಿಂದ ಪ್ರಯಾಣ ಮಾಡುತ್ತಾರೆ. ಮಣ್ಣಿನ ಹೆಂಟೆಯಿಂದ ಮಾಡಿದ ಐದು ಪಾಂಡವರನ್ನು ಪೂಜಿಸಿ, ತಾವು ಮಾಡಿಕೊಂಡು ಬಂದ ಆಡುಗೆಯನ್ನು ನೈವೇದ್ಯ ಮಾಡಿ, ಅದನ್ನು ಒಂದು ತಗ್ಗಿನಲ್ಲಿ ಹಾಕಿ ಮುಚ್ಚುತ್ತಾರೆ. ತದನಂತರ ಹೊಲದ ತುಂಬಾ ತಿರುಗಾಡಿ "ಹುಲ್ಲಿ ಹುಲ್ಲಿಗೋ, ಚಲ್ಲಿ ಚಲ್ಲಿಗೋ" ಎಂದು ಕೂಗುತ್ತ  ಆಡುಗೆಯನ್ನು ಎಲ್ಲ ಕಡೆ ಪಸರಿಸುವಂತೆ ಭೂಸಮರ್ಪಣೆ ಮಾಡುತ್ತಾರೆ. ಇದಕ್ಕೆ ವೈಜ್ಞಾನಿಕ  ಹಿನ್ನಲೆಯೂ ಉಂಟು. ಈ ಸಮಯದಲ್ಲಿ ರೈತರು ಹಿಂಗಾರೆ ಬೆಳೆಯನ್ನು[ ಕಡಲೆ, ಜೋಳ ] ಬೆಳೆದಿರುತ್ತಾರೆ. ಚಳಿ ಸರಿದು, ಬಿಸಿಲು ಆವರಿಸುವ ಸಮಯವಿದು. ಉಷ್ಣ ಹೆಚ್ಚಿದಂತೆ ಕ್ರಿಮಿ ಕೀಟಗಳ ಬೆಳವಣಿಗೆಯು ಹೆಚ್ಚಾಗುತ್ತದೆ, ಇವುಗಳು ಹೊಲದ ಬೆಳೆಗಳನ್ನು ನಾಶಮಾಡುತ್ತವೆ. ರೈತರು ಚರಗದಲ್ಲಿ ಚೆಲ್ಲಿದ ಆಹಾರವನ್ನು ಕಂಡು ಹಕ್ಕಿಗಳು, ಅದನ್ನು ತಿನ್ನಲು ಕೆಳಗಿಳಿದಾಗ, ಬೆಳೆಗೆ ಅಂಟಿದ ಕೀಟಗಳನ್ನು ಸೇವಿಸುತ್ತವೆ ಮತ್ತು ಬೆಳೆಯನ್ನು ಹುಳುಗಳಿಂದ ಮುಕ್ತಮಾಡುತ್ತವೆ. ಬೆಳೆ ಸಂಮೃದ್ದವಾಗಿ ಬೆಳೆದು ರೈತನ ಮನ ತಣಿಸುತ್ತದೆ. ಹೀಗೆ ಈ ಹಬ್ಬ ಸಾಂಪ್ರದಾಯಿಕ  ಮತ್ತು ವೈಜ್ಞಾನಿಕ ಹಿನ್ನಲೆಯನ್ನು ಹೊಂದಿದೆ. 



ನಮ್ಮ ಮನೆಯಲ್ಲೂ ಈ ಹಬ್ಬವನ್ನು ಅತೀ ಸಂಬ್ರಮದಿಂದ ಮಾಡುತ್ತಾರೆ. ಈ ಸಾರಿ ಜನ ಕಡಿಮೆ ಇದ್ದರೂ, ಸಂತಸದಿ ಆಚರಿಸಿದೆವು. ಮಧ್ಯಾನ ಸುಮಾರು 12, ನಾವು ಹೊಲವನ್ನು ತಲುಪಿದಾಗ. ಜನ ಕಡಿಮೆ ಇರುವುದರಿಂದ ಈ ಸಾರಿ ಟ್ಯಾಕ್ಟರ ನಲ್ಲಿ ಹೋಗಲಿಲ್ಲ, ಕಾರಿನಲ್ಲೇ ಹೊಲದೆಡೆಗೆ ನಡೆದೆವು. ಎಷ್ಟೋ ದಿನಗಳಾಗಿತ್ತು ಹೊಲವನ್ನು ನೋಡಿ. ನಮ್ಮ ಹೊಲದಲ್ಲಿ ಕಡಲೆಯನ್ನು  ಹಾಕಿದ್ದರು, ಸ್ವಲ್ಪ ಮುಂಚೆಯೇ ಬೆಳೆಯನ್ನು ಹಾಕಿದ್ದರಿಂದ, ಕಡಲೆ ಸ್ವಲ್ಪ ಒಣದಾಗಿತ್ತು. ಬನ್ನಿಮರದ ಹತ್ತಿರವಿದ್ದ ಸ್ವಲ್ಪ ಕಡಲೆಯನ್ನು ಕಿತ್ತು ಗುಡಾರ ಹಾಸಿ ನಾವು ತಂದ ಸಾಮಗ್ರಿಯನ್ನು ಅದರ ಮೇಲೆ ಇರಿಸಿದೇವು. ನನ್ನ ಅಮ್ಮ ಪಾಂಡವರನ್ನು ತರಲು ಹೇಳಿದಳು, ನಾವು ನಗಲಾರಂಭಿಸಿದೆವು. ಏನಿದು ಪಾಂಡವರು ಎಂದು ಕೇಳಿದಾಗ, ಅವಳೆಂದಳು " ಅವರು ಈ ನೆಲೆವನ್ನು ಕಾಯುವ ದೇವರು, ಅವರಿಗೆ ಪೂಜೆ ಸಲ್ಲಿಸಬೇಕು, ಹೋಗಿ ಮಣ್ಣಿನ ಹೆಂಟೆಗಳನ್ನು ಹುಡುಕಿ ತನ್ನಿ" ಎಂದಳು. ಅದರಂತೆಯೇ ನಾವು ಅಲ್ಲಿ ಇಲ್ಲಿ ಬಿದ್ದ ಹೆಂಟೆಗಳನ್ನು ತಂದು ಬನ್ನಿ ಮರದ ಕಡೆ ಇಟ್ಟು ಪೂಜೆ ಮಾಡಿದೆವು. ನಂತರ ದೇವರಿಗೆ ಎಡೆ ಮಾಡಿ, ಅಲ್ಲೇ ಒಂದು ತಗ್ಗು ತೆಗೆದು ಅದರಲ್ಲಿ ನೈವೇದ್ಯ ಹಾಕಿ ಮುಚ್ಚಿದೇವು. ನಂತರ ಹೊಲದ ತುಂಬೆಲ್ಲ ಅಲೆದಾಡಿ ನಾನು ಮತ್ತು ನನ್ನ ತಂಗಿ " ಹುಲ್ಲಿ ಹುಲ್ಲಿಗೋ ಚಲ್ಲಿ ಚಲ್ಲಿಗೋ " ಎಂದು ಕೂಗುತ್ತ, ಆಡುಗೆಯನ್ನುಹೊಲದ ತುಂಬಾ ಹರಡುತ್ತಾ  5 ಪ್ರದಕ್ಷಣೆ ಹಾಕಿದೆವು. ಅಷ್ಟರಲ್ಲೇ ನಮಗೆ ಹಸಿವಾಗಿ ಹೋಗಿತ್ತು, ಊಟ ಯಾವಾಗ ಮಾಡುತ್ತೆವೊ ಎನಿಸಿಬಿಟ್ಟಿತು. ಎಲ್ಲರು ಕೂತು ಊಟ ಮಾಡತೊಡಗಿದೆವು. ಊಟದಲ್ಲಿ ಮೊದಲು - ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಯ, ಪುಂಡಿಪಲ್ಯ, ಕುಚ್ಚಿದ ಖಾರದ ಪಲ್ಯ, ಮಡಕೆಕಾಳಿನ ಪಲ್ಯ, ಉಂಡಗಡಬು,ಶೇಂಗಾ ಚಟ್ನಿ, ಅಗಸೆ ಚಟ್ನಿ, ಮೊಸರು ಜೊತೆಯಲ್ಲಿ ನೆಂಜಲು ಉಳ್ಳಗಡ್ಡಿ, ಮೂಲಂಗಿ, ಸವತೆಕಾಯಿ. ಅಬ್ಬಾ !!! ನೋಡಿಯೇ ಬಾಯಲ್ಲಿ ನೀರು ಬರುತ್ತಿತ್ತು. ಎಲ್ಲವನ್ನೂ ಬಡಿಸಿದಾಗ ಯಾವುದನ್ನು ಮೊದಲು ತಿನ್ನಬೇಕೋ ತಿಳಿಯಲಿಲ್ಲ. ಎಷ್ಟು ಚಪಾತಿ ಹಾಕಿದ್ದರೋ ಗೊತ್ತಿಲ್ಲ ತಿಂದದ್ದೇ  ತಿಂದದ್ದು. ಇಷ್ಟೆಲ್ಲಾ ತಿನ್ನುವುದರಲ್ಲೇ ಸಾಕಾಗಿ ಹೋಗಿತು. ಇನ್ನೂ ಎರಡು ಹಂತಗಳಿದ್ದವು. ಅಮ್ಮ ನಿಧಾನವಾಗಿ ತಿನ್ನಲು ಹೇಳಿದಳು. ಅದರಂತೆ ಎಲ್ಲರು ನಿಧಾನವಾಗಿ ಊಟವನ್ನು ಸವಿಯುತ್ತಿದ್ದೆವು. ಎರಡನೆದಾಗಿ - ಸಿಹಿಯ ಪದಾರ್ಥಗಳು, ನನಗಂತೂ ಸಿಹಿ ಎಂದರೆ ಆಗುವುದಿಲ್ಲ, ಬೇಡವೆಂದರು ಅಮ್ಮ ತಿನ್ನಲೇಬೇಕೆಂದು ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಕಡಬು ಅದರ ಜೊತೆ ತುಪ್ಪ, ಸೆಂಡಿಗೆ, ಹಪ್ಪಳ ಬಡಿಸಿದಳು. ಹೇಗೋ ಮಾಡಿ ಸುಮಾರು ಹೊತ್ತಿಗೆ ಸಿಹಿ ತಿಂದೇವು. ಮೂರನೇ ಹಂತದಲ್ಲಿ ಅನ್ನ  ಮತ್ತು ಬೆಳೆ ಕಟ್ಟಿನ ಸಾರು, ಅದನ್ನು ಸ್ವಲ್ಪ ಬಡಿಸಿಕೊಂಡು ತಿಂದೇವು. ಆಷ್ಟರಲ್ಲಿ ಸಾಕಾಗಿ ಹೋಗಿತ್ತು. 
        ನಾವೆಲ್ಲ ಊಟ ಮುಗಿಸಿ ಮೇಲೆ ಎಳಲು ಹೋದಾಗ ಆಗಲೇ ಇಲ್ಲ. ಸ್ವಲ್ಪ ಹೊತ್ತು ಸಾವದಾನಿಸಿ ಮೇಲೆ ಎದ್ದೆವು. ಸ್ವಲ್ಪ ನಡೆದಾಡ ತೊಡಗಿದೆವು. ಸ್ವಲ್ಪ ಹಗುರ ಎನಿಸಿತು., ಅಮ್ಮ ಮತ್ತೆ ನಮ್ಮನ್ನು ಕೂಗಿ  ಎಲೆ ಅಡಿಕೆ ಹಾಕಿಕೊಳ್ಳಲು ಹೇಳಿದಳು. ನಮಗೆಲ್ಲ ಎಲೆ ಅಡಿಕೆ ಎಂದರೆ ತುಂಬಾ ಇಷ್ಟ, ಅವಳೆಡೆಗೆ ಬಂದು ಎಲೆ ಆಡಿಕೆ ಹಾಕಿಕೊಂಡು ಕುಳಿತುಕೊಂಡೆವು. ಅಮ್ಮನು ಊಟ ಮಾಡಿದಳು. ಊಟ ಸಂಪೂರ್ಣವಾಗಿದ್ದರಿಂದ ನಿದ್ದೆ ಬರತೊಡಗಿತು. ಎಲ್ಲರು ಗುಡಾರದ ಮೇಲೆ ಮಲಗಿ ಸ್ವಚ್ಛಂದ ಆಗಸವನ್ನು ನೋಡುತ್ತಾ ಹಳೆಯ ನೆನಪುಗಳನ್ನು ಮೆಲಕು ಹಾಕಿದೆವು. ಎಷ್ಟೋ ಸಂತಸವೆನಿಸಿತು!! ಮನದಲ್ಲಿ ರೈತನ ಬಗ್ಗೆ ಅಪಾರ ಗೌರವ ಮೂಡಿತು. ಅವನಿಗೆ ಕೋಟಿ ಕೋಟಿ ನಮನಗಳು ಎಂದು ಮನ ಹಾರೈಸಿತು. ಕೆಲವೊಬ್ಬರು ಪ್ರಶಾಂತ ಗಾಳಿಗೆ ನಿದ್ದೆಗೆ ಜಾರಿದರು. ಕೆಲವೊಬ್ಬರು ನೀಲಿ ಆಗಸ ನೋಡುತ್ತಾ ಮಲಗಿದ್ದರು. ಈಗ ಸಮಯ ಸುಮಾರು 4:30,, ನಾನು ಮತ್ತು ನನ್ನ ಜೊತೆ ಬಂದಿದ್ದ ಅಕ್ಕನೊಂದಿಗೆ ಕೆರೆಗೆ ಹೋಗಿ ಪೂಜೆ ಮಾಡಿಕೊಂಡು  ಬಂದೆವು. ಅಷ್ಟರಲ್ಲಿ ಎಲ್ಲರು ಎದ್ದು ಕುಳಿತಿದ್ದರು. ಅಮ್ಮ ಮತ್ತು ನನ್ನ ಕಾಕಾ ಸ್ವಲ್ಪ ಹಸಿಕಡಲೆಯನ್ನು ಮನೆಗೆ ತೆಗೆದುಕೊಂಡು ಹೋಗಲು ಕಿತ್ತರು. ಸುಮಾರು 6 ಘಂಟೆ, ಕತ್ತಲಾಗುತ್ತಿತ್ತು ಎಲ್ಲರು ತಂದ ಸಾಮಗ್ರಿಗಳನ್ನು ಗಾಡಿಯಲ್ಲಿ ಇಟ್ಟರು. ಮನೆಗೆ ಹೋಗಲು ಮನಸೇ ಇಲ್ಲ. ಮತ್ತೇ  ಭೂಮಿಗೆ ನಮನಸಲ್ಲಿಸಿ,  ಮನೆದಾರಿ ಹಿಡಿದೆವು. 
         ಸಂಪ್ರದಾಯಗಳು ಹಳೆಯದಾದರು, ಆಚರಣೆ ಮಾಡುವ ಅನುಭವ ಹೊಸದು. ನಮ್ಮವರೊಂದಿಗೆ ಚಿತ್ತ ಮನಸ್ಸಿನಿಂದ ಕಾಲ ಕಳೆಯಲು ಹಬ್ಬಗಳು ಉಪಯುಕ್ತವಾಗಿವೆ. ನಮ್ಮ ನಾಡು ನಮ್ಮ ದೇಶ ನಮ್ಮ ಸಂಪ್ರದಾಯ ನಮ್ಮ ಹೆಮ್ಮೆ. ಹಳ್ಳಿಯ ಆಚರಣೆಗಳನ್ನು ಉಳಿಸೋಣ, ಹಳ್ಳಿಗಳಿಂದ ನಾಡನ್ನು ಕಟ್ಟೋಣ. 

ನಮ್ಮ ಚರಗದ ಚಿತ್ರಗಳು :
===================
 ಚರಗ 2014















ಚರಗ - 2015
=========






























ಚರಗ -2020
===========




No comments:

Post a Comment

ಜೀವನ ಸಾಗುತಿರೆ'